Thursday, 16 July 2015



Draft - demands. All of you Please respond and put in your corrections. Please note: There are 3 different types of demands.. Immediate, short term and Long term.
ಹಕ್ಕೊತ್ತಾಯಗಳ ಕರಡು: ನಿಮ್ಮೆಲ್ಲರ ಅಭಿಪ್ರಾಯ ಹಾಗೂ ತಿದ್ದುಪಡಿಗಾಗಿ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಬರೆಯಿರಿ.


ತಕ್ಷಣದ ಹಕ್ಕೊತ್ತಾಯಗಳು
  1. ಸಕ್ಕರೆ ಕಾರ್ಖಾನೆಗಳು ಈ ಸಾರಿಯ ಕ್ರಷಿಂಗ್ಅನ್ನು ಈ ಕೂಡಲೇ ಆರಂಭಿಸಬೇಕು. ಅವಧಿ ಮೀರಿದ ಕಬ್ಬನ್ನು ಆದ್ಯತೆಯ ಮೇರೆಗೆ ಕ್ರಷಿಂಗ್ ಮಾಡಬೇಕು. ಕಬ್ಬಿನ ಬಾಕಿ ಏನೂ ಇಲ್ಲದಂತೆ ಕಾಯ್ದೆಯನುಸಾರ ಹಣ ನೀಡಬೇಕು. ಈಗ ನಿಗದಿ ಮಾಡಿರುವ ಎಫ್.ಆರ್.ಪಿ ಅವೈಜ್ಞಾನಿಕವಾಗಿದ್ದು, ಟನ್ನಿಗೆ 3500 ರೂ. ನಿಗದಿಯಾಗಬೇಕು. ಈ ಎಲ್ಲಾ ಅಂಶಗಳಿಗೆ ಸರ್ಕಾರ ನೇರ ಹೊಣೆಯಾಗಿದ್ದು, ಸಕ್ಕರೆ ಕಾರ್ಖಾನೆ ಮುಟ್ಟುಗೋಲು, ಸರ್ಕಾರದಿಂದಲೇ ನೇರ ನಗದು ಪಾವತಿ ಒಳಗೊಂಡಂತೆ ಯಾವುದೇ ಬಗೆಯ ಕ್ರಮ ಅಗತ್ಯವಿದ್ದರೂ ಅವನ್ನು ತೆಗೆದುಕೊಳ್ಳಬೇಕು. ಈಗ ಎಲ್ಲಾ ಕಬ್ಬನ್ನು ಕ್ರಷ್ ಮಾಡಬೇಕೆಂದರೆ, ಆಲೆಮನೆಗಳಿಗೂ ಸಹಾಯಧನ ನೀಡಬೇಕು. ಅವಧಿ ಮೀರಿದ ಕಬ್ಬಿನಿಂದ ಆಗುತ್ತಿರುವ ನಷ್ಟಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಬೇಕು.
  2. ಸಕ್ಕರೆ ಉದ್ದಿಮೆ ಮುಂದಿಟ್ಟಿರುವ “40 ಲಕ್ಷ ಟನ್ ಗಳನ್ನು 'ಬಫರ್ ಸ್ಟಾಕ್' ಆಗಿ ಕೊಂಡು ಇಟ್ಟುಕೊಳ್ಳಬೇಕು” ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿ ಸದ್ಯದ ಬಿಕ್ಕಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು. ರಂಗರಾಜನ್ ಸಮಿತಿಯ ಯಾವುದೇ ಶಿಫಾರಸ್ಸುಗಳನ್ನು ಜಾರಿಗೊಳಿಸಬಾರದು.
  3. ಈಗಲೂ ಸಾಲದ ನೋಟೀಸ್ ಗಳು ರೈತರ ಮನೆ ಬಾಗಿಲಿಗೆ ತಲುಪುತ್ತಿವೆ. ಅವು ನಿಲ್ಲಬೇಕು. ರೈತರ ಎಲ್ಲಾ ಸಾಲ ಮನ್ನಾ ಆಗಬೇಕು. ಮನ್ನಾ ತೀರ್ಮಾನ ತಡವಾಗುವುದಾದಲ್ಲಿ ಹೊಸ ಸಾಲ ಕೊಡಲು ಹಳೆಯ ಬಾಕಿ ಅಡ್ಡಿ ಅಲ್ಲ ಎಂಬ ನಿರ್ಧಾರ ಪ್ರಕಟಿಸಬೇಕು. ಸಹಕಾರ ಸಂಘಗಳ ಮೇಲೆ ಈ ಹೊರೆ ಹಾಕುವುದಕ್ಕಿಂತ, ಸರ್ಕಾರವೇ ಹೊಣೆ ಮತ್ತು ಹೊರೆ ಹೊತ್ತುಕೊಳ್ಳಬೇಕು. ಕಬ್ಬು ಒಪ್ಪಿಗೆ ಪತ್ರದ ಆಧಾರದ ಮೇಲೆ ಮಾತ್ರ ಸಾಲ ನೀಡುವುದು ತಪ್ಪಬೇಕು. ಎಲ್ಲಾ ಬೆಳೆಗಳಿಗೂ ಸಾಲ ಸೌಲಭ್ಯ ನೀಡಬೇಕು. ಜಮೀನಿನ ಕಾಗದ ಪತ್ರಗಳಲ್ಲಿ ಸಮಸ್ಯೆ ಇದ್ದರೆ, ಅವನ್ನು ಒಂದು ವಾರದ ಒಳಗೆ ಬಗೆಹರಿಸಿ ಸಾಲ ನೀಡಲು ಬೇಕಾದ ಏಕಗವಾಕ್ಷಿ ಕೇಂದ್ರವನ್ನು ತೆರೆಯಬೇಕು.
  4. ಖಾಸಗಿ ಲೇವಾದೇವಿಗಾರರ ಮೇಲೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕು. ಆದರೆ ಸರ್ಕಾರದ ಸಾಂಸ್ಥಿಕ ಸಾಲಗಳು ಕಡಿಮೆಯಾದಾಗ, ಖಾಸಗಿ ಸಾಲಗಳು ಹೆಚ್ಚಾಗುತ್ತವೆ ಎಂಬ ಮೂಲ ಕಾರಣ ಬಗೆಹರಿಸದೇ ಹೋದಲ್ಲಿ, ಜನರು ಮತ್ತಷ್ಟು ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ.
  5. ಕಬ್ಬು ಒಣಗದಿರಲು ಕೆ.ಆರ್.ಎಸ್.ನಿಂದ ನೀರು ಹರಿಸಿ, ಟೇಲೆಂಡ್ ಭಾಗದವರೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.
  6. ಹಾಲಿನ ದರ ಇಳಿಸಿರುವುದನ್ನು ಹಿಂತೆಗೆದುಕೊಳ್ಳಬೇಕು. ಹಾಲಿನ ದರ ಏರಿದಾಗಲೆಲ್ಲಾ ಫೀಡ್ಸ್ ದರ ಏರಿಸುವುದನ್ನು ಮಾಡಬಾರದು. ಪ್ರತಿ ಲೀಟರ್ ಹಾಲಿಗೆ 26 ರೂ. ನೀಡಬೇಕು.
  7. ಈ ಸದ್ಯ ದೇಶದ ರೈತರ ಮೇಲೆ ಪರಿಣಾಮ ಬೀರುವ ಆಹಾರ ಧಾನ್ಯಗಳ ಆಮದನ್ನು ನಿಲ್ಲಿಸಬೇಕು; ರೇಷ್ಮೆ ಆಮದು ನಿಲ್ಲಿಸಬೇಕು.
  8. ನರೇಗಾ ಯೋಜನೆಯಡಿ ಲಭ್ಯವಿರುವ ಎಲ್ಲಾ ಕಾಮಗಾರಿಗಳನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡಬೇಕು. ವೇತನ ಪಾವತಿ ತಕ್ಷಣದಲ್ಲಿ ಆಗುವಂತೆ ನೋಡಿಕೊಳ್ಳಬೇಕು. 
  9. ಈ ತಿಂಗಳಿಂದಲೇ ಮದ್ಯದ ಟಾರ್ಗೆಟ್ ಕಡಿಮೆ ಮಾಡುತ್ತಾ ಹೋಗಬೇಕು. ಸರ್ಕಾರವೇ ವ್ಯವಸ್ಥಿತವಾಗಿ ಹೆಚ್ಚಿಸುತ್ತಾ ಬಂದಿರುವ ಮದ್ಯದ ಮಾರಾಟವನ್ನು 2004ರ ಮಟ್ಟಕ್ಕೆ ಇಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
  10. ರೈತರಿಗೆ ಆತ್ಮಸ್ಥೈರ್ಯ ತುಂಬಲು ಸರ್ಕಾರ ಕೆಲವು ದೊಡ್ಡ ಹಾಗೂ ಮಹತ್ವದ ಕ್ರಮಗಳನ್ನು ಮುಂದಿಡಬೇಕು.

ಅಲ್ಪಕಾಲೀನ ಹಕ್ಕೊತ್ತಾಯಗಳು
  1. ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಸಂಪೂರ್ಣ ಸರ್ಕಾರೀ ವೆಚ್ಚದಲ್ಲಿ ಖಾತರಿಗೊಳಿಸಬೇಕು. ಖಾಸಗಿ ವಲಯದ ದರೋಡೆಯನ್ನು ನಿಯಂತ್ರಿಸಬೇಕು.
  2. ಒಳಸುರಿ (ಗೊಬ್ಬರ, ಬೀಜ ಇತ್ಯಾದಿ) ಸಬ್ಸಿಡಿ, ಬೆಂಬಲ ಬೆಲೆ ಖಾತ್ರಿ ಮತ್ತು ಬೆಳೆ ನಷ್ಟ ಪರಿಹಾರ ಹಾಗೂ ಉದ್ಯೋಗ ನೀಡಿಕೆ, ಈ ನಾಲ್ಕು ಕ್ರಮಗಳ ಮೂಲಕ ಕೃಷಿ ಮತ್ತು ಕೃಷಿ ಕೂಲಿಕಾರರ ಪ್ರತಿ ಕುಟುಂಬಕ್ಕೆ ಕನಿಷ್ಠ 20,000 ರೂ. ಆದಾಯ ಖಾತ್ರಿ ನೀಡಬೇಕು.
  3. ಕೆಎಂಎಫ್ ಮಾದರಿ ವ್ಯವಸಾಯೋತ್ಪನ್ನಗಳ ಮಾರಾಟಕ್ಕೆ ಸಹಕಾರಿ ಒಕ್ಕೂಟ ಸ್ಥಾಪನೆಗೆ ಮುಂದಾಗಬೇಕು. ಸರ್ಕಾರ ಸಂಪೂರ್ಣ ಬೆಂಬಲಕ್ಕೆ ನಿಲ್ಲಬೇಕು.
  4. ವರದಕ್ಷಿಣೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ವಿವಿಧ ಸ್ವರೂಪದ ಕ್ರಮಗಳು ಮತ್ತು ಹಂತ ಹಂತವಾಗಿ ಪಾನನಿಷೇಧದ ಕಡೆ ಸಾಗಲು ಬೇಕಾದ ಕ್ರಮಗಳು.
  5. ಜಮೀನಿನ ಮೌಲ್ಯ ಆಧರಿಸಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡ್ಡಾಯ ಮಾಡಬೇಕು.
  6. ಎಲ್ಲಾ ಬೆಳೆಗಳ ಬೆಲೆ ನಿಗದಿಗೆ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಜನಸಾಮಾನ್ಯರಿಗೆ ಎಲ್ಲಾ ಬಗೆಯ ಆಹಾರ ಧಾನ್ಯಗಳನ್ನು ಸಬ್ಸಿಡಿ ಮೂಲಕ ತಲುಪುವಂತೆ ಮಾಡುವುದು. ಎಲ್ಲಾ ಬೆಳೆಗಳಿಗೂ ಬೆಲೆ ನಿಗದಿ ಮಾಡಲು ಕೃಷಿ ಬೆಲೆ ಆಯೋಗಕ್ಕೆ ಅಧಿಕಾರ.
  7. ರೈತರಿಗೆ ಎಲ್ಲೆಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಬಿತ್ತನೆಯಾಗಲಿದೆ, ಆಗಿದೆ ಎಂಬುದನ್ನು ಕೇಂದ್ರೀಕೃತ ಡಾಟಾ ಬೇಸ್ ಮೂಲಕ ತಲುಪಿಸಬೇಕು
  8. ಸರ್ಕಾರೀ ಮತ್ತು ಸಹಕಾರೀ ವಲಯದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಇರಬೇಕು. ಸರ್ಕಾರದ ನಿರ್ದೇಶನ ಪಾಲಿಸದ ಖಾಸಗಿ ಕಾರ್ಖಾನೆಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ಮೂಲಕ ಮುಂದಿನ 3-4 ವರ್ಷಗಳಲ್ಲಿ ಶೇ.50ರಷ್ಟು ಸಕ್ಕರೆ ಕಾರ್ಖಾನೆಗಳು ಈ ವಲಯಕ್ಕೆ ಬರುವಂತೆ ನೋಡಿಕೊಳ್ಳಬೇಕು. 
  9. ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ವಶೀಲಿ, ಅಧಿಕಾರಸ್ಥರ ಸಾಮೀಪ್ಯ ಇಲ್ಲದೆಯೂ ಸಾಲ ಸಿಗುವಂತೆ ಆಗಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
  10. ಶಿಂಷಾದ ಹೆಚ್ಚಿನ ಏತ ನೀರಾವರಿಗಳು ಕೆಲಸ ಮಾಡುತ್ತಿಲ್ಲ. ಕೆಲವು ಆರಂಭವೇ ಆಗಲಿಲ್ಲ. ಇನ್ನು 6 ತಿಂಗಳ ಒಳಗೆ ಇವೆಲ್ಲವೂ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು.


ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಹಕ್ಕೊತ್ತಾಯಗಳು
  1. ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಬೆಲೆ ನಿಗದಿಯಲ್ಲಿ ರೈತರದ್ದು ನಿರ್ಧಾರಕ ಪಾತ್ರ ಇರುವಂತೆ ನೋಡಿಕೊಳ್ಳಬೇಕು.
  2. ಇಡೀ ದೇಶದಲ್ಲಿ ಏನು ಬೆಳೆಯಬೇಕು, ಏನು ಬೆಳೆಯಬಾರದು ಎಂಬುದನ್ನು ರೈತರ ಪರಿಸ್ಥಿತಿ, ದೇಶದ ಜನರ ಅಗತ್ಯ ಹಾಗೂ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸುವುದು ಮತ್ತು ಅದಕ್ಕೆ ತಕ್ಕಂತೆ ರೈತ ಸಮುದಾಯಕ್ಕೆ ಮಾಹಿತಿ, ಅರಿವು ಹಾಗೂ ಪ್ರೋತ್ಸಾಹದಾಯಕ ಕ್ರಮಗಳನ್ನು ನೀಡುವುದು.
  3. ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಅಪಾಯಕ್ಕೆ ದೂಡಿರುವ ಡಬ್ಲ್ಯುಟಿಓದಿಂದ ಹೊರಬರಬೇಕು. ಲಕ್ಷಾಂತರ ರೈತರ ಆತ್ಮಹತ್ಯೆಗೆ ಕಾರಣವಾಗಿರುವುದಕ್ಕಿಂತ ದೊಡ್ಡ ಕಾರಣ ಬೇಕಿಲ್ಲ.
  4. ಅಧಿಕ ಇಳುವರಿ ತರುವ, ಹೆಚ್ಚು ಪೌಷ್ಟಿಕತೆ ಇರುವ ವಿವಿಧ ರೀತಿಯ ತಳಿಗಳ ಸಂಶೋಧನೆ ನಡೆಯಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ದೂರ ಸರಿದು ವೈಜ್ಞಾನಿಕ, ಪರಿಸರ ಸ್ನೇಹಿ, ಸುಸ್ಥಿರ ಕೃಷಿಯತ್ತ ಸಾಗಬೇಕು. ಇದು ರೈತ ಜನಾಂದೋಲನದಿಂದ ಮೂಡಿಬರುವ ಅರಿವು ಮತ್ತು ಸರ್ಕಾರದ ಹೊಣೆಗಾರಿಕೆ ಇವೆರಡರ ಜಂಟಿ ಪ್ರಯತ್ನದಿಂದ ಮಾತ್ರ ಸಾಧ್ಯ.
  5. ಕೃಷಿ ಮತ್ತು ಕೃಷಿ ಪೂರಕವಾದ ಇತರ ಕಸುಬುಗಳು (ಹೈನುಗಾರಿಕೆ, ಕುರಿ-ಆಡು-ಕೋಳಿ-ಹಂದಿ ಸಾಕಾಣಿಕೆ, ಮೀನುಗಾರಿಕೆ ಇತ್ಯಾದಿ) ಒಂದರೊಡನೊಂದು ಜೊತೆಗೂಡಿ ನಡೆಯಲು ಬೇಕಾದ ಪ್ರೋತ್ಸಾಹದಾಯಕ ಕ್ರಮಗಳು ಮತ್ತು ರೂಪಿಸುವುದು
  6. ಮಾರುಕಟ್ಟೆ ಮೇಲೆ ಯಾರಿಗೆ ನಿಯಂತ್ರಣ ಎನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಮಿಕ್ಕೆಲ್ಲಾ ಕ್ರಮಗಳನ್ನು ನಿರ್ಧರಿಸುವ ಅಂಶ ಇದಾಗಿದೆ. ಒಳಸುರಿ ಹಾಗೂ ಬೆಳೆದ ಪದಾರ್ಥ ಎರಡರಲ್ಲೂ ದೊಡ್ಡ ಬಂಡವಾಳಿಗರ ಪಾತ್ರ ಇಲ್ಲದಂತೆ ಮಾಡಬೇಕು. ರೈತ ಸಹಕಾರಿಗಳೇ ಮಾರುಕಟ್ಟೆಯ ನೇತೃತ್ವ ವಹಿಸಬೇಕು.
  7. ನೀರಾವರಿ: ದೇಶದಲ್ಲಿ ಲಭ್ಯವಿರುವ ಒಟ್ಟೂ ನೀರಿನ ಸಂಪನ್ಮೂಲದ ಸಮರ್ಪಕ ಹಾಗೂ ವೈಜ್ಞಾನಿಕ ಬಳಕೆಯಿಂದ ದೇಶಕ್ಕೆ ಅಗತ್ಯವಿರುವ ಎಲ್ಲಾ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
  8. ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗುತ್ತಿದೆ; ಇನ್ನೂ ಹೆಚ್ಚಾಗಲಿದೆ. ಇದರಿಂದ ಆಗಿರುವ ಮತ್ತು ಮುಂದೆ ಆಗಲಿರುವ ಸಮಸ್ಯೆಗಳನ್ನು ಮುಂಗಂಡು, ಮೇಲೆ ಹೇಳಲಾದ ಎಲ್ಲಾ ಪರಿಹಾರೋಪಾಯಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

No comments:

Post a Comment